ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಹುಟ್ಟಿ ಬೆಳೆದ ಕ್ಷೇತ್ರದ ವೋಟರ್ ಲಿಸ್ಟ್ನಿಂದಲೇ ಕೊಕ್!
ಬೆಂಗಳೂರು: ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ (ಪ್ರಕಾಶ್ ರೈ) ಅವರ ಹೆಸರು ಬೆಂಗಳೂರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ತಾವು ಹುಟ್ಟಿ ಬೆಳೆದ ಕ್ಷೇತ್ರದಿಂದಲೇ ತಮ್ಮ ಮತದಾನದ ಹಕ್ಕನ್ನು ತೆಗೆದುಹಾಕಿರುವುದರ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬೇಸರ ಹೊರಹಾಕಿದ ನಟ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಪ್ರಕಾಶ್ ರಾಜ್, “ನಾನು ಹುಟ್ಟಿ, ಬೆಳೆದು, ಓದಿ, ರಂಗಭೂಮಿಯಲ್ಲಿ ಕೆಲಸ ಮಾಡಿದ ಬೆಂಗಳೂರು ಕ್ಷೇತ್ರದಲ್ಲಿ ಈಗ ನನ್ನ ಹೆಸರೇ ಇಲ್ಲ. ಒಮ್ಮೆ ಇದೇ ಕ್ಷೇತ್ರದಿಂದ ನಾನು ಲೋಕಸಭಾ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದೆ. ಆದರೆ, ಈಗ ಪಟ್ಟಿಯಿಂದ ಡಿಲೀಟ್ ಆಗಿರುವ ಲಕ್ಷಾಂತರ ಮತದಾರರಲ್ಲಿ ನಾನೂ ಒಬ್ಬನಾಗಿದ್ದೇನೆ. ಇದು ಅತ್ಯಂತ ಬೇಸರದ ಸಂಗತಿ,” ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಎಫೆಕ್ಟ್ ಕರ್ನಾಟಕದಲ್ಲಿ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಜಂಟಿಯಾಗಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (Special Intensive Revision – SIR) ಕಾರ್ಯವನ್ನು ಕೈಗೊಂಡಿವೆ. ಈ ಪ್ರಕ್ರಿಯೆಯಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು ಮತ್ತು ಮೃತಪಟ್ಟವರನ್ನು ಗುರುತಿಸಿ (ASDDO ನಿಯಮಗಳಡಿ) ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದೇ ಪ್ರಕ್ರಿಯೆಯಡಿ ಪ್ರಕಾಶ್ ರಾಜ್ ಅವರ ಹೆಸರು ಕೂಡ ಡಿಲೀಟ್ ಆಗಿದೆ ಎಂದು ಹೇಳಲಾಗುತ್ತಿದೆ.
ಕಾನೂನು ಪ್ರಕ್ರಿಯೆಗೆ ಸಿದ್ಧ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಅದನ್ನು ಮರಳಿ ಪಡೆಯಲು ತಾವು ಸಿದ್ಧರಿರುವುದಾಗಿ ನಟ ಸ್ಪಷ್ಟಪಡಿಸಿದ್ದಾರೆ. ತಮ್ಮ ವೋಟರ್ ಐಡಿಯನ್ನು ಮರಳಿ ಪಡೆಯಲು ಯಾವೆಲ್ಲಾ ಅಧಿಕೃತ ಪ್ರಕ್ರಿಯೆಗಳನ್ನು ಹಾಗೂ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕೋ ಅದನ್ನೆಲ್ಲಾ ಎದುರಿಸುತ್ತೇನೆ ಎಂದು ಅವರು ದೃಢವಾಗಿ ಹೇಳಿದ್ದಾರೆ.
ಸದ್ಯ ಬಿಬಿಎಂಪಿ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮುಂದುವರಿದಿದ್ದು, ಲಕ್ಷಾಂತರ ಮಂದಿ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
