ರಾಜ್ಯ

ರಾಂಚಿಯಲ್ಲಿ ರಣರಂಗವಾದ ‘ವಿಧಾನಸಭೆ ಮುತ್ತಿಗೆ’: ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿದ ಪೊಲೀಸರು!

Spread the love

ರಾಂಚಿ: ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಭಾರೀ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಜಲ ಫಿರಂಗಿ (Water cannon) ಹಾಗೂ ಅಶ್ರುವಾಯು ಪ್ರಯೋಗಿಸಿದ್ದಾರೆ.

ಜೆಪಿಎಸ್‌ಸಿ (JPSC) ಮತ್ತು ಜೆಎಸ್‌ಎಸ್‌ಸಿ (JSSC) ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮವನ್ನು ವಿರೋಧಿಸಿ ‘ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ರಿಫಾರ್ಮ್ ಮೋರ್ಚಾ’ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಜಾರ್ಖಂಡ್ ವಿಧಾನಸಭೆ ಮುತ್ತಿಗೆ (ವಿಧಾನಸಭಾ ಘೇರಾವ್) ಹಮ್ಮಿಕೊಂಡಿದ್ದರು. ಮುಂಗಾರು ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆದರೆ, ಬ್ಯಾರಿಕೇಡ್‌ಗಳನ್ನು ಮುರಿದು ವಿಧಾನಸಭೆಯತ್ತ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.

ರಣರಂಗವಾದ ರಾಂಚಿ ರಸ್ತೆಗಳು

ಪ್ರತಿಭಟನಾ ನಿರತ ಸಾವಿರಾರು ವಿದ್ಯಾರ್ಥಿಗಳು ಸತತ ಮೂರು ಹಂತದ ಬ್ಯಾರಿಕೇಡ್‌ಗಳನ್ನು ಭೇದಿಸಿ ಮುಂದೆ ಸಾಗಿದ್ದರು. ಈ ವೇಳೆ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗದ ಪೊಲೀಸರು ಮೊದಲು ಜಲ ಫಿರಂಗಿ ಹಾಗೂ ಅಶ್ರುವಾಯು ಸಿಡಿಸಿದರು. ಆದರೂ ಜಗ್ಗದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುಂದೆ ಸಾಗಿದಾಗ ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಲಾಗಿದೆ.

ಪೊಲೀಸರ ಲಾಠಿ ಏಟಿನಿಂದಾಗಿ ಹಲವು ವಿದ್ಯಾರ್ಥಿನಿಯರು ಸೇರಿದಂತೆ ಅನೇಕ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಜಾರ್ಖಂಡ್ ಸಶಸ್ತ್ರ ಪೊಲೀಸ್ (JAP) ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಬ್ಯುಲೆನ್ಸ್‌ನಲ್ಲಿ ಬಂದ ನಾಯಕ!

ಕಳೆದ ೯ ದಿನಗಳಿಂದ ನೇಮಕಾತಿ ಅಕ್ರಮ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾ (JLKM) ನಾಯಕ ದೇವೇಂದ್ರ ನಾಥ್ ಮಹತೋ ಅವರು ಆಂಬ್ಯುಲೆನ್ಸ್ ಮೂಲಕವೇ ಬಂದು ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. “ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ, ಮುಳ್ಳುತಂತಿಗಳಾಗಲಿ, ಲಾಠಿಗಳಾಗಲಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಗುಡುಗಿದ್ದಾರೆ.

ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳೇನು?

  • ಇತ್ತೀಚೆಗೆ ನಡೆದ JSSC-CGL ಸೇರಿದಂತೆ ವಿವಾದಾತ್ಮಕ ನೇಮಕಾತಿ ಪರೀಕ್ಷೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು.
  • ನೇಮಕಾತಿಯಲ್ಲಿ ನಡೆದಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಭ್ರಷ್ಟಾಚಾರದ ಬಗ್ಗೆ ಸಿಬಿಐ (CBI) ತನಿಖೆಯಾಗಬೇಕು.
  • ರಾಜ್ಯದ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರಲು ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸಬೇಕು.

ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜನ್ಮದಿನದಂದೇ ಈ ಭಾರಿ ಪ್ರತಿಭಟನೆ ನಡೆದಿದ್ದು, ಸರ್ಕಾರವು ವಿದ್ಯಾರ್ಥಿಗಳ ಆಕ್ರೋಶವನ್ನು ಹೇಗೆ ಶಮನ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ