ತ್ರಿವರ್ಣ ಧ್ವಜವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜ್ಯಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಸೂಚನೆ!
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಮತ್ತು ‘ಹರ್ ಘರ್ ತಿರಂಗಾ’ ಅಭಿಯಾನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ (MHA) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸೂಚನೆಯೊಂದನ್ನು ರವಾನಿಸಿದೆ. ರಾಷ್ಟ್ರಧ್ವಜಗಳ ಬಳಕೆಯ ವಿಚಾರದಲ್ಲಿ ‘ಭಾರತೀಯ ಧ್ವಜ ಸಂಹಿತೆ’ಯನ್ನು (Flag Code of India) ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಿದೆ.
ಎಲ್ಲೆಂದರಲ್ಲಿ ಎಸೆಯುವಂತಿಲ್ಲ! ಸ್ವಾತಂತ್ರ್ಯ ದಿನಾಚರಣೆ, ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾರ್ವಜನಿಕರು ಕಾಗದದ ಧ್ವಜಗಳನ್ನು ಬಳಸಬಹುದು. ಆದರೆ, ಕಾರ್ಯಕ್ರಮ ಮುಗಿದ ಬಳಿಕ ಆ ಧ್ವಜಗಳನ್ನು ನೆಲದ ಮೇಲೆ ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ತ್ರಿವರ್ಣ ಧ್ವಜದ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ಖಾಸಗಿಯಾಗಿ ಮತ್ತು ಸೂಕ್ತ ರೀತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ರಾಜ್ಯಗಳಿಗೆ ಜಾಗೃತಿ ಮೂಡಿಸಲು ಸೂಚನೆ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ರಾಷ್ಟ್ರಧ್ವಜ ಪ್ರದರ್ಶನದ ನಿಯಮಗಳು ಮತ್ತು ಪದ್ಧತಿಗಳ ಬಗ್ಗೆ ಸಾರ್ವಜನಿಕರು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಅರಿವಿನ ಕೊರತೆ ಇರುವುದನ್ನು ಉಲ್ಲೇಖಿಸಿದೆ. “ರಾಷ್ಟ್ರಧ್ವಜವು ನಮ್ಮ ದೇಶದ ಜನರ ಭರವಸೆ ಮತ್ತು ಆಕಾಂಕ್ಷೆಗಳ ಸಂಕೇತವಾಗಿದೆ. ಹಾಗಾಗಿ ಅದಕ್ಕೆ ಅತ್ಯುನ್ನತ ಗೌರವ ಸಲ್ಲಬೇಕು,” ಎಂದು ತಿಳಿಸಿರುವ ಸಚಿವಾಲಯ, ಈ ಬಗ್ಗೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಧ್ವಜ ಸಂಹಿತೆಯ ಪ್ರಮುಖ ನಿಯಮಗಳೇನು?
- ಘನತೆಯ ಪ್ರದರ್ಶನ: ರಾಷ್ಟ್ರಧ್ವಜವನ್ನು ಪ್ರದರ್ಶಿಸುವಾಗ ಅದು ಹರಿದು ಹೋಗಿರಬಾರದು ಅಥವಾ ಸುಕ್ಕುಗಟ್ಟಿರಬಾರದು. ಯಾವಾಗಲೂ ಅದಕ್ಕೆ ಗೌರವಾನ್ವಿತ ಸ್ಥಾನ ನೀಡಬೇಕು.
- ಸರಿಸಮಾನವಾದ ಧ್ವಜವಿಲ್ಲ: ರಾಷ್ಟ್ರಧ್ವಜದ ಕಂಬದಲ್ಲಿ ಬೇರೆ ಯಾವುದೇ ಧ್ವಜವನ್ನು ಹಾರಿಸುವಂತಿಲ್ಲ ಮತ್ತು ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಬೇರೆ ಯಾವ ಧ್ವಜವೂ ಇರಕೂಡದು.
- ಹಗಲು-ರಾತ್ರಿ ಪ್ರದರ್ಶನ: ೨೦೨೨ರ ತಿದ್ದುಪಡಿಯ ಅನ್ವಯ, ಸಾರ್ವಜನಿಕರು ಅಥವಾ ಖಾಸಗಿ ಸಂಸ್ಥೆಗಳು ರಾಷ್ಟ್ರಧ್ವಜವನ್ನು ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲೂ ಹಾರಿಸಬಹುದು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಆರಂಭವಾಗಿರುವ ‘ಹರ್ ಘರ್ ತಿರಂಗಾ’ (Har Ghar Tiranga) ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
