ನಮ್ಮನ್ನು ತಡೆಯಲು ಸಾಧ್ಯವಿಲ್ಲ’: ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್ ಆಗಿದ್ದಕ್ಕೆ ಪ್ರಕಾಶ್ ರೈ ಆಕ್ರೋಶ!
ಬೆಂಗಳೂರು: ಖ್ಯಾತ ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರು ಬೆಂಗಳೂರು ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಟ್ಟಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ಸದಾ ತಮ್ಮ ‘#JustAsking’ ಅಭಿಯಾನದ ಮೂಲಕ ಧ್ವನಿ ಎತ್ತುವ ಅವರು, “ನಿಮ್ಮ ಅಧಿಕಾರದಿಂದ ನಮ್ಮ ಹಕ್ಕನ್ನು ಕಸಿಯಬಹುದು, ಆದರೆ ನಮ್ಮನ್ನು ತಡೆಯಲು ಸಾಧ್ಯವಿಲ್ಲ” ಎಂದು ಗುಡುಗಿದ್ದಾರೆ.
ವಿಡಿಯೋ ಮೂಲಕ ತೀವ್ರ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್ ರೈ, ಇದೊಂದು ಅಚ್ಚರಿಯ ಹಾಗೂ ಬೇಸರದ ಸಂಗತಿ ಎಂದಿದ್ದಾರೆ. “ನಾನು ಹುಟ್ಟಿ, ಬೆಳೆದು, ಓದಿ, ರಂಗಭೂಮಿಯಲ್ಲಿ ಕೆಲಸ ಮಾಡಿದ ಬೆಂಗಳೂರು ಕ್ಷೇತ್ರದಲ್ಲಿ ಈಗ ನನ್ನ ಹೆಸರೇ ಇಲ್ಲ. ಒಮ್ಮೆ ಇದೇ ಕ್ಷೇತ್ರದಿಂದ ಲೋಕಸಭಾ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದೆ. ಆದರೆ, ಈಗ ಪಟ್ಟಿಯಿಂದ ಡಿಲೀಟ್ ಆಗಿರುವ ಲಕ್ಷಾಂತರ ಮತದಾರರಲ್ಲಿ ನಾನೂ ಒಬ್ಬನಾಗಿದ್ದೇನೆ. ಇದೊಂದು ದೊಡ್ಡ ಜೋಕ್” ಎಂದು ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಅಧಿಕಾರಸ್ಥರಿಗೆ ನೇರ ಸವಾಲು ಪ್ರಸ್ತುತ ರಾಜಕೀಯ ವ್ಯವಸ್ಥೆಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಅವರು, ತಮ್ಮ ಹಕ್ಕನ್ನು ಕಸಿದುಕೊಂಡಿರುವುದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ನಾನು ನಿಮಗೆ ಮತ ಹಾಕುವುದಿಲ್ಲ ಎಂಬ ಒಂದೇ ಕಾರಣಕ್ಕೆ, ನಿಮ್ಮ ಕೈಲಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನನ್ನಂತಹ ಕೆಲವರ ಮತದಾನದ ಹಕ್ಕನ್ನು ನೀವು ಕಸಿದುಕೊಳ್ಳಬಹುದು. ಆದರೆ, ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ನಮ್ಮ ಶಕ್ತಿ ಹಾಗೂ ಹೋರಾಟವನ್ನು ತಡೆಯಲು ನಿಮ್ಮಿಂದ ಖಂಡಿತಾ ಸಾಧ್ಯವಿಲ್ಲ” ಎಂದು ಕಟುವಾಗಿ ಎಚ್ಚರಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಿಬಿಎಂಪಿ ಹಾಗೂ ಚುನಾವಣಾ ಆಯೋಗವು ಪ್ರಸ್ತುತ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (Special Intensive Revision – SIR) ಕಾರ್ಯವನ್ನು ಕೈಗೊಂಡಿದೆ. ಸ್ಥಳಾಂತರಗೊಂಡವರು, ಗೈರುಹಾಜರಾದವರು ಮತ್ತು ಮೃತಪಟ್ಟವರನ್ನು (ASDDO) ನಿಯಮಾವಳಿಗಳ ಅನ್ವಯ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಪ್ರಕ್ರಿಯೆಯಲ್ಲೇ ಪ್ರಕಾಶ್ ರೈ ಅವರ ಹೆಸರೂ ಸಹ ಡಿಲೀಟ್ ಆಗಿದೆ ಎನ್ನಲಾಗಿದೆ.
ತಮ್ಮ ಹಕ್ಕನ್ನು ಮರಳಿ ಪಡೆಯಲು ಅಧಿಕೃತ ಪ್ರಕ್ರಿಯೆಗಳನ್ನು ಎದುರಿಸಲು ಸಿದ್ಧವಿರುವುದಾಗಿ ನಟ ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಅತ್ಯಮೂಲ್ಯವಾಗಿದ್ದು, ತಮ್ಮ ವೋಟರ್ ಐಡಿಯನ್ನು ಮರಳಿ ಪಡೆಯಲು ಯಾವೆಲ್ಲಾ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕೋ ಅದನ್ನೆಲ್ಲಾ ಎದುರಿಸುತ್ತೇನೆ ಎಂದು ಅವರು ದೃಢವಾಗಿ ತಿಳಿಸಿದ್ದಾರೆ.
