ಕಾವೇರಿ ಕಿಚ್ಚು: ಮೇಕೆದಾಟು ಯೋಜನೆ ವಿರೋಧಿಸಿ ರಾಜ್ಯಸಭೆಯಲ್ಲಿ ಡಿಎಂಕೆಯಿಂದ ನಿಲುವಳಿ ಸೂಚನೆ ಮಂಡನೆ!
ನವದೆಹಲಿ: ಕರ್ನಾಟಕದ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ‘ಮೇಕೆದಾಟು ಸಮತೋಲನಾ ಜಲಾಶಯ’ (Mekedatu Balancing Reservoir) ಯೋಜನೆಗೆ ತಮಿಳುನಾಡು ಮತ್ತೊಮ್ಮೆ ಅಡ್ಡಗಾಲು ಹಾಕಲು ಮುಂದಾಗಿದೆ. ಯೋಜನೆ ಕುರಿತು ಸಂಸತ್ತಿನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಡಿಎಂಕೆ (DMK) ಸಂಸದ ತಿರುಚಿ ಶಿವ, ಈ ವಿಚಾರವಾಗಿ ರಾಜ್ಯಸಭೆಯಲ್ಲಿ ತುರ್ತು ಚರ್ಚೆ ನಡೆಸುವಂತೆ ಆಗ್ರಹಿಸಿ ನಿಲುವಳಿ ಸೂಚನೆ (Notice under Rule 267) ಮಂಡಿಸಿದ್ದಾರೆ.
ಕಲಾಪ ರದ್ದುಗೊಳಿಸಲು ಆಗ್ರಹ:
ರಾಜ್ಯಸಭಾ ಮಹಾಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ತಿರುಚಿ ಶಿವ, ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೀವ್ರ ಬಾಧಕವಾಗಲಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಸದನದ ನಿಯಮ 15, 23 ಮತ್ತು 51 ರ ಅಡಿ ರಾಜ್ಯಸಭೆಯ ಇಂದಿನ ಎಲ್ಲಾ ಕಲಾಪಗಳನ್ನು ಬದಿಗೊತ್ತಿ, ಕೇವಲ ಮೇಕೆದಾಟು ಜಲಾಶಯ ನಿರ್ಮಾಣದಿಂದ ತಮಿಳುನಾಡಿನ ಮೇಲಾಗುವ ಪರಿಣಾಮಗಳ ಕುರಿತು ತುರ್ತು ಚರ್ಚೆ ನಡೆಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ತಮಿಳುನಾಡು ವಾದವೇನು?
ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ದಶಕಗಳಿಂದ ಕಾನೂನು ಮತ್ತು ರಾಜಕೀಯ ಸಂಘರ್ಷ ನಡೆಯುತ್ತಲೇ ಇದೆ. ಒಂದು ವೇಳೆ ಕರ್ನಾಟಕ ಮೇಕೆದಾಟು ಜಲಾಶಯ ನಿರ್ಮಾಣ ಮಾಡಿದರೆ, ಕೆಳಭಾಗದ ರಾಜ್ಯವಾದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಹಾಗೂ ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬೀಳಲಿದೆ ಎಂಬುದು ತಮಿಳುನಾಡು ಸರ್ಕಾರದ ಪ್ರಮುಖ ವಾದವಾಗಿದೆ.
ರಾಜಕೀಯ ಮೇಲಾಟ:
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಗಳನ್ನು ಕರ್ನಾಟಕ ಸರ್ಕಾರ ಸರಿಯಾಗಿ ಪಾಲಿಸುತ್ತಿಲ್ಲ ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ ಎಂದು ತಮಿಳುನಾಡು ಸಂಸದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಮೇಲೆ ಹಾಗೂ ಕಾವೇರಿ ನದಿ ಪ್ರಾಧಿಕಾರದ ಮೇಲೆ ರಾಜಕೀಯ ಒತ್ತಡ ಹೇರುವುದು ತಮಿಳುನಾಡಿನ ತಂತ್ರಗಾರಿಕೆಯ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾವೇರಿ ಕೊಳ್ಳದ ರೈತರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿನ ಈ ಬೆಳವಣಿಗೆ ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ತೀವ್ರ ಕುತೂಹಲ ಮೂಡಿಸಿದೆ.
