ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಆರ್‌ಸಿಬಿಯೇ ಕಿಂಗ್: ಎಂಎಸ್ ಧೋನಿಯ ಸಿಎಸ್‌ಕೆಗೆ ಎಷ್ಟನೇ ಸ್ಥಾನ? ಇಲ್ಲಿದೆ ಡಿಟೇಲ್ಸ್!
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಕ್ರಿಕೆಟ್ ಪಂದ್ಯಾವಳಿಯಲ್ಲ, ಅದೊಂದು ಬಹುದೊಡ್ಡ ಬ್ಯುಸಿನೆಸ್ ಬ್ರ್ಯಾಂಡ್. ಪ್ರತಿ ವರ್ಷ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯದಲ್ಲಿ ಏರಿಳಿತಗಳು ಸಾಮಾನ್ಯ. ಆದರೆ, ಈ ಬಾರಿಯ ಬ್ರ್ಯಾಂಡ್ ಮೌಲ್ಯದ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಮತ್ತೆ ತನ್ನ ಪ್ರಾಬಲ್ಯ ಮೆರೆದಿದ್ದು, ‘ಕಿಂಗ್’ ಆಗಿ ಹೊರಹೊಮ್ಮಿದೆ. ಅದೇ ವೇಳೆ, ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಿನ್ನಡೆ ಅನುಭವಿಸಿದೆ.
ಆರ್‌ಸಿಬಿಗೆ ಅಗ್ರಸ್ಥಾನ ಒಲಿದಿದ್ದೇಗೆ? ಮೊದಲಿನಿಂದಲೂ ಆರ್‌ಸಿಬಿ ಕಪ್ ಗೆಲ್ಲದಿದ್ದರೂ ಫ್ಯಾನ್ಸ್ ಕ್ರೇಜ್ ಕಮ್ಮಿಯಾಗಿರಲಿಲ್ಲ. ಹಾಗಿರುವಾಗ ಎರಡೆರಡು ಬಾರೀ ಕಪ್ ಗೆದ್ದ ಮೇಲಂತೂ ಆರ್‌ಸಿಬಿ ತಂಡದ ಕ್ರೇಜ್ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿರಾಟ್ ಕೊಹ್ಲಿಯಂತಹ ಜಾಗತಿಕ ತಾರೆಯ ಇರುವಿಕೆ, ಸಾಮಾಜಿಕ ಜಾಲತಾಣಗಳಲ್ಲಿ ತಂಡಕ್ಕಿರುವ ಮಿಲಿಯನ್‌ಗಟ್ಟಲೆ ಅಭಿಮಾನಿಗಳ ಬೆಂಬಲ, ನವೀನ ಮಾರ್ಕೆಟಿಂಗ್ ತಂತ್ರಗಳು ಹಾಗೂ ಮರ್ಚಂಡೈಸ್ ಮಾರಾಟವು ಆರ್‌ಸಿಬಿ ಬ್ರ್ಯಾಂಡ್ ಮೌಲ್ಯವನ್ನು ಉತ್ತುಂಗಕ್ಕೇರಿಸಿದೆ. ಅಭಿಮಾನಿಗಳ ಅಚಲ ನಿಷ್ಠೆಯೇ ಆರ್‌ಸಿಬಿಯನ್ನು ಬ್ರ್ಯಾಂಡ್ ಮೌಲ್ಯದಲ್ಲಿ ನಂಬರ್ 1 ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.
4ನೇ ಸ್ಥಾನಕ್ಕೆ ಕುಸಿದ ಚೆನ್ನೈ ಸೂಪರ್ ಕಿಂಗ್ಸ್: ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದ್ದರೂ, ಇತ್ತೀಚಿನ ಬ್ರ್ಯಾಂಡ್ ಮೌಲ್ಯದ ಲೆಕ್ಕಾಚಾರದಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಧೋನಿಯವರ ನಿವೃತ್ತಿಯ ಊಹಾಪೋಹಗಳು ಹಾಗೂ ತಂಡದ ನಾಯಕತ್ವ ಬದಲಾವಣೆಗಳು ಪ್ರಾಯೋಜಕತ್ವ ಮತ್ತು ಬ್ರ್ಯಾಂಡ್ ಮೌಲ್ಯದ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಹೃದಯ ಗೆದ್ದಿರುವ ಆರ್‌ಸಿಬಿ, ವಾಣಿಜ್ಯ ಮಾರುಕಟ್ಟೆಯಲ್ಲೂ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಐಪಿಎಲ್‌ನ ಅತಿ ದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವುದು ಅಭಿಮಾನಿಗಳಿಗೆ ಸಂಭ್ರಮ ತಂದಿದೆ.
